ಬಳ್ಳಾರಿ,ಮೇ. 28 : ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆ ನಗರದ ಚರಂಡಿ ಸಮಸ್ಯೆಯ ಹಲವು ಮುಖಗಳನ್ನು ತೆರೆದಿಟ್ಟಿದೆ.ಕೊಳೆಗೇರಿಗಳಲ್ಲಂತೂ ಮಳೆ ಎಂದರೆ ಜನ ನಡುಗುವಂತಾಗಿದೆ. ಇನ್ನೊಂದೆಡೆ ಗುಂಡಿಬಿದ್ದ ರಸ್ತೆಗಳಲ್ಲಿ ನೀರು ತುಂಬಿದ್ದು,ನಗರ ಕೆಸರುಗದ್ದೆಯಂತಾಗುತ್ತಿವೆ.
ನಗರದಲ್ಲಿ ನಿತ್ಯ 155 ಟನ್ನಷ್ಟು ಕಸ ಸಂಗ್ರಹ ಮಾಡಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಆದರೆ,ನಗರದ ಬಹುತೇಕ ಪ್ರದೇಶಗಳಲ್ಲಿ
ಚರಂಡಿಗಳು ಕಸವನ್ನೇ ಹೊದ್ದು ಮಲಗಿದಂತೆ ಕಾಣುತ್ತಿದ್ದು, ಪಾಲಿಕೆಯ ಕಸವಿಲೇವಾರಿಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ. ಚರಂಡಿಯಲ್ಲಿನ ಕಸದಿಂದಾಗಿ ನೀರು ಹರಿದು ಹೋಗದೆ ಜನವಸತಿಪ್ರದೇಶಗಳತ್ತ ನುಗ್ಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಬದುಕೇ ದುಸ್ತರ ಎಂಬಂತಾಗಿದೆ.
ರಾಣಿತೋಟ, ಕಣೇಕಲ್ ಬಸ್ ನಿಲ್ದಾಣದ ವ್ಯಾಪ್ತಿಯ ಪ್ರದೇಶ, ಬಾಪೂಜಿ ನಗರ, ವಡ್ಡರಬಂಡೆ, ಬಂಡಿಮೋಟ್, ದೇವಿನಗರ, ಇಂದಿರಾನಗರ, ರೂಪನಗುಡಿ ರಸ್ತೆ, ಬೆಂಗಳೂರು ರಸ್ತೆಯ ಅಕ್ಕಪಕ್ಕದ ಪ್ರದೇಶಗಳು, ಎಪಿಎಂಸಿ ಯಾರ್ಡ್ ಪ್ರದೇಶ, ಜಾಗೃತಿ ನಗರ ಮಿಲ್ಲರ್ ಪೇಟೆ, ಕೌಲ್ ಬಜಾರ್ ಪ್ರದೇಶದಲ್ಲಿ ಚರಂಡಿ ಸಮಸ್ಯೆ ಮೊದಲಿನಿಂದಲೂ ತಾಂಡವವಾಡುತ್ತಿತ್ತು. ಆದರೆ, ಈಗ ಸುರಿಯುತ್ತಿರುವ ಮಳೆಯು ಜನರನ್ನು ಮತ್ತಷ್ಟು ಸಮಸ್ಯೆಗೆ ದೂಡಿದೆ.
ನಗರದ ಹಲವುಕಡೆ ಸಮಸ್ಯೆ….
ರಾಣಿತೋಟ ಪ್ರದೇಶದ ಇಲಾಹಿ ಮಸೀದಿ ಸರ್ಕಲ್ನಲ್ಲಿ ಕಾಲುವೆಗೆ ಅಳವಡಿಸಲಾಗಿದ್ದ ಕಸದ ಗೇಟ್ ಕಿತ್ತುಹಾಕಲಾಗಿದೆ.ಹೀಗಾಗಿ ಕಾಲುವೆ ಮುಂದಿನ ಪ್ರದೇಶದ ಜನರ ಮನೆಗಳಿಗೆಲ್ಲ ಕೊಳಚೆ ನೀರು ನುಗ್ಗುತ್ತಿದೆ.ರಾಣಿ ತೋಟಮುಖ್ಯ ರಸ್ತೆಯಲ್ಲಿನ ಕಾಲುವೆಯ ಸೇತುವೆ ಮೇಲೆ ಕಾಲುವೆಯ ಕಸ ತೆಗೆದು ಹಾಕಲಾಗುತ್ತಿದೆ.ಮಳೆ ಬಂದರೆ,ಈ ತ್ಯಾಜ್ಯವುನೀರಿನೊಂದಿಗೆ ಕಲೆತು ಪಕ್ಕದ ಮನೆಗಳತ್ತ ನುಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ