ಬಳ್ಳಾರಿ,ಆ.19 : ಪ್ರಸ್ತುತ ದಿನಗಳಲ್ಲಿ ನಾವೆಲ್ಲರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಕಾರ್ಮಿಕ ಇಲಾಖೆ, ಗೃಹ ರಕ್ಷಕ ದಳ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ‘ವಿಶ್ವ ಮಾನವೀಯ ದಿನಾಚರಣೆ’ ಅಂಗವಾಗಿ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಪ್ರಪಂಚದಲ್ಲಿ ನಡೆದಿದ್ದ ವಿವಿಧ ರಾಷ್ಟçಗಳ ನಡುವಿನ ಯುದ್ಧದ ಸಂದರ್ಭದಲ್ಲಿ ಊಟ, ವಸತಿ, ವೈದ್ಯಕೀಯ ಸೌಲಭ್ಯ ಸೇರಿದಂತೆ ಸಾಕಷ್ಟು ಪ್ರಭಾವ ಬೀರಿತ್ತು. ಆ ಸಂದರ್ಭದಲ್ಲಿ ಸಹಾಯ ಮಾಡಲು ಮಾನವೀಯ ಮೌಲ್ಯಗಳೇ ಪ್ರಮುಖ ಕಾರಣವಾದವು. ಹಾಗಾಗಿ ತಮ್ಮ ಸುತ್ತ ಮುತ್ತ ಏನೇ ಅವಘಡ ಸಂಭವಿಸಿದಾಗ ತುರ್ತು ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ಮಾನವೀಯತೆ ಆಗಿದೆ ಎಂದು ತಿಳಿಸಿದರು.
ಮಾನವೀಯ ಮೌಲ್ಯಗಳು ಸ್ವಯಂ ಪ್ರೇರಿತರಾಗಿ ಅಳವಡಿಸಿಕೊಳ್ಳಬೇಕಿದೆ. ಪ್ರವಾಹ, ಅನಿರೀಕ್ಷಿತ ಕಟ್ಟಡ ಕುಸಿತದ ಸಂದರ್ಭದಲ್ಲಿ, ಯುದ್ಧದ ಸಂದರ್ಭದಲ್ಲಿ ತಕ್ಷಣ ಭಾಗವಹಿಸಿ ಸಹಾಯ ಒದಗಿಸುವುದು ಮಾನವೀಯತೆಯ ಲಕ್ಷಣವಾಗಿದೆ. ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ತಂಡ ಆಗಮಿಸಲು ತಡವಾದಾಗ ಸುತ್ತ-ಮುತ್ತಲಿನವರು ಜಾಗರೂಕರಾಗಿ ಮಾನವೀಯತೆಯ ಮೂಲಕ ಸಹಾಯ ಕರ್ತವ್ಯ ಮರೆಯಬೇಕು. ಇಲ್ಲದಿದ್ದಲ್ಲಿ ಆ ಜೀವನವು ಮೌಲ್ಯಯುತವಾದುದಲ್ಲ ಎಂದು ತಿಳಿಸಿದರು.
ನಾವು ಸುರಕ್ಷಿತರಾಗಿರಬೇಕು. ಇತರರನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಜಾಗರೂಕರಾಗಿರಬೇಕು ಎಂದು ತಿಳಿಸಿದ ಅಪರ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಸಹ ಸಾರ್ವಜನಿಕ ಸೇವೆ ಸೌಲಭ್ಯ ಒದಗಿಸಲು ವಿಳಂಬ ಮಾಡಬಾರದು. ಜನರನ್ನು ಕಚೇರಿಗಳಿಗೆ ಅಲೆದಾಡಿಸಬಾರದು ಎಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ಮಾತನಾಡಿ, 2008 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವಿಶ್ವ ಮಾನವೀಯ ದಿನವನ್ನು ಆಚರಿಸಲು ಅಂಗೀಕರಿಸಿತ್ತು. 2009 ರಲ್ಲಿ ಅಧೀಕೃತವಾಗಿ ಆಚರಿಸಲಾಯಿತು ಎಂದು ತಿಳಿಸಿದರು.
ಬಳಿಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಆರೋಗ್ಯ, ಕಾರ್ಮಿಕ, ಅಗ್ನಿಶಾಮಕ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆಯ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಐದು ವಿಷಯಗಳ ಕುರಿತು ಸಲಹೆ ಮತ್ತು ಅಂಶಗಳನ್ನು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪರಿಣಿತ ಪರಮೇಶ, ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಜೆ.ಖೈನೂರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿ ಗೋವಿಂದಪ್ಪ.ಹೆಚ್.ಎA ಸೇರಿದಂತೆ ಜಿಲ್ಲಾ ಮಾನವೀಯ ಕಾರ್ಯಕರ್ತರು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.