ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಯಲಹಂಕದಲ್ಲಿ 2.75 ಎಕರೆ ಪ್ರದೇಶದಲ್ಲಿದ್ದ 85 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿಯನ್ನು ಮಂಗಳವಾರ ತೆರವುಗೊಳಿಸಿದ್ದಾರೆ.
ಕಂದಾಯ ಇಲಾಖೆ ಹಾಗೂ ಪೊಲೀಸರ ಸಹಕಾರದೊಂದಿಗೆ ಬಿಬಿಎಂಪಿ ಮಂಗಳವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು. ಬಿಬಿಎಂಪಿ ಹೇಳಿಕೆ ಪ್ರಕಾರ, ಅತಿಕ್ರಮಣದಾರರು ಯಲಹಂಕದ ಬ್ಯಾಟರಾಯನಪುರ ವಿಭಾಗದ ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯ ಕೋಟಿಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 52ರಲ್ಲಿ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ತಾತ್ಕಾಲಿಕ ಶೆಡ್ಗಳನ್ನು ಹಾಕಿಕೊಂಡು ವಾಣಿಜ್ಯ ಸಂಸ್ಥೆಗಳನ್ನೂ ನಡೆಸುತ್ತಿದ್ದರು ಎಂದು ಹೇಳಿದೆ.
ಭೂಮಿ ಒತ್ತುವರಿ ವಿಚಾರ ತಿಳಿದ ಕೂಡಲೇ ಬಿಬಿಎಂಪಿ ಯಲಹಂಕ ವಲಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಮಂಗಳವಾರ ತೆರವು ಕಾರ್ಯಾಚರಣೆ ನಡೆಸಿದರು.
ಒತ್ತುವರಿ ಕಾರ್ಯಾಚರಣೆಯಲ್ಲಿ ನಾಲ್ಕು ಜೆಸಿಬಿಗಳು, 12 ಟ್ರ್ಯಾಕ್ಟರ್ಗಳನ್ನು ಮತ್ತು 140 ಪೊಲೀಸ್ ಸಿಬ್ಬಂದಿ ಮತ್ತು 70 ಕಾರ್ಮಿಕರು ಬಳಸಿಕೊಳ್ಳಲಾಗಿತ್ತು. ಅತಿಕ್ರಮಣಗೊಂಡ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ, ತಕ್ಷಣವೇ ಬೇಲಿ ಹಾಕಲಾಯಿತು. ಈ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ’ ಎಂದು ಯಲಹಂಕ ವಲಯದ ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.