ರಾಕಿಂಗ್ ಸ್ಟಾರ್’ ಯಶ್ ಹಾಗೂ ಪ್ಯಾನ್ ಇಂಡಿಯಾ ಡೈರೆಕ್ಟರ್ ರಾಜಮೌಳಿ ಅವರು ಬಳ್ಳಾರಿಯ ಶ್ರೀ ಅಮೃತೇಶ್ವರ ದೇವಸ್ಥಾನದ ಉದ್ಘಾಟನೆಯಲ್ಲಿ ಭಾಗಿ ಆಗಿದ್ದಾರೆ. ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಯಶ್ ಮಾತನಾಡಿದ್ದಾರೆ.
‘ದೇವರ ದರ್ಶನಕ್ಕೆ ಬಂದಿದ್ದೇನೆ. ಸಾಯಿ ಅವರು ನಮ್ಮ ಆತ್ಮೀಯರು. ‘ಕೆಜಿಎಫ್ 1’ ಸಿನಿಮಾವನ್ನು ತೆಲುಗಿನಲ್ಲಿ ಅವರು ವಿತರಣೆ ಮಾಡಿದ್ದರು. ಆ ಸಿನಿಮಾದ ಗೆಲುವಿಗೆ ಅವರು ಕೂಡ ಕಾರಣ ಆಗಿದ್ದರು. ಅವರು ತುಂಬ ದೈವ ಭಕ್ತರು ಕೂಡ ಹೌದು. ಅವರು ಊರಿನಲ್ಲಿ ದೇವಸ್ಥಾನದ ಕಟ್ಟುವಾಗ ನನಗೆ ಮೊದಲೇ ಹೇಳಿದ್ದರು. ಅದಕ್ಕಾಗಿ ಇವತ್ತು ಬಂದಿದ್ದೇನೆ. ದೇವರ ದರ್ಶನ ಮಾಡಿದೆ. ಪೂಜೆಯಲ್ಲಿ ಭಾಗಿದ್ದು ಬಹಳ ಖುಷಿ ಆಯಿತು’ ಎಂದು ಯಶ್ ಹೇಳಿದ್ದಾರೆ.
ಶ್ರೀ ಅಮೃತೇಶ್ವರ ದೇವಸ್ಥಾನದ ಉದ್ಘಾಟನೆ ಬಳಿಕ ಮಾಧ್ಯಮದವರ ಜೊತೆ ಯಶ್ ಮಾತನಾಡಿದ್ದಾರೆ. ಈ ವೇಳೆ ತಮ್ಮ ವೈರಲ್ ಫೋಟೋದ ಬಗ್ಗೆಯೂ ಅವರು ಮಾತನಾಡಿದರು. ‘ಅದು ನಮ್ಮ ರಾಧಿಕಾ ಅವರ ಮನೆಯ ಬಳಿಯ ದೇವಸ್ಥಾನಕ್ಕೆ ಹೋದಾಗ ಮಕ್ಕಳು ತಿಂಡಿ ಕೇಳಿದ್ದರು. ತಿಂಡಿ ಕೊಡಿಸುತ್ತಿದ್ದೆ ಅಷ್ಟೇ. ಆ ಅಂಗಡಿಗೆ ನಾವು 10-12 ವರ್ಷದಿಂದ ಹೋಗುತ್ತಿದ್ದೇವೆ’ ಎಂದು ಯಶ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಯಶ್ ವಿಡಿಯೋ ವೈರಲ್:
‘ಸಿಂಪಲ್ ಎಂಬುದು ಏನೂ ಅಲ್ಲ. ಯಾಕೆಂದರೆ ಐಷಾರಾಮಿ ಕಾರು ಮತ್ತು ವಿಮಾನದಲ್ಲಿ ಓಡಾಡುತ್ತೇವೆ. ಅದರಲ್ಲಿ ಯಾವ ಸರಳತೆ ಇದೆ? ಸಹಜವಾಗಿ ಇರುವುದನ್ನೇ ಜನರು ಸರಳತೆ ಅಂತಾರೆ ಈಗ. ನಾವು ಬೆಳೆದಿರುವುದೇ ಹಾಗೇ. ಅದನ್ನೂ ತಿನ್ನುತ್ತೇವೆ, ಫೈ ಸ್ಟಾರ್ ಹೋಟೆಲ್ಗೂ ಹೋಗುತ್ತೇವೆ. ಜೀವನದಲ್ಲಿ ಎಲ್ಲವೂ ಇರಬೇಕು’ ಎಂದು ಯಶ್ ಹೇಳಿದ್ದಾರೆ.
ಇದೇ ವೇಳೆ ರಾಜಕೀಯದ ಬಗ್ಗೆ ಬಗ್ಗೆಯೂ ಯಶ್ ಅವರಿಗೆ ಪ್ರಶ್ನೆ ಎದುರಾಯಿತು. ದೇವಸ್ಥಾನದ ಆವರಣದಲ್ಲಿ ರಾಜಕೀಯದ ಕುರಿತು ವಿಷಯ ಎತ್ತಿದ್ದು ಅವರಿಗೆ ಸರಿ ಎನಿಸಲಿಲ್ಲ. ‘ನಿನಗೇನಾದರೂ ಬುದ್ಧಿ ಇದೆಯೇನಯ್ಯ? ರಾಜಕೀಯದ ಬಗ್ಗೆ ಕೇಳುವ ಜಾಗನಾ ಇದು? ನೀವು ಹೀಗೆಲ್ಲ ಮಾಡಬಾರದು’ ಎಂದು ಯಶ್ ಗರಂ ಆಗಿದ್ದಾರೆ. ಆ ಮೂಲಕ ಅವರು ರಾಜಕೀಯದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.