ಬೆಂಗಳೂರು, ಫೆ. 23; ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗಳು ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಕರ್ನಾಟಕ ನೀರಾವರಿ ನಿಗಮದ ಪರಿಶೀಲನೆಯ ಹಂತದಲ್ಲಿದ್ದು, ಅನುದಾನದ ಲಭ್ಯತೆ ಆಧರಿಸಿ ಕಾಮಗಾರಿಗಳನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉತ್ತರ ನೀಡಿದ್ದಾರೆ.
ಬಳ್ಳಾರಿ ಮತ್ತು ವಿಜಯನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು, ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡ, ಅಸುಂಡಿ, ಅಮರಾಪುರ, ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ತಗ್ಗಿನ ಬೂದಿಹಾಳ್, ಗೋಡೆಹಾಳ್ ಗ್ರಾಮಗಳ ಕುಡಿಯುವ ನೀರು ಮತ್ತು ಸಂಡೂರು ತಾಲೂಕಿ 59 ಹಾಗೂ ಕೊಟ್ಟೂರು ತಾಲೂಕಿನ ಕರೆ ಸೇರಿ ಇನ್ನಿತರೆ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಈ ಯೋಜನೆಗಳು ಜಾರಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರ ಆಗುವುದಲ್ಲದೇ, ಅಂತರ್ಜಲಮಟ್ಟ ಸುಧಾರಣೆ ಆಗಲಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಡಿ.ಕೆ. ಶಿವಕುಮಾರ್ ಅವರು, ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡ, ಅಸುಂಡಿ, ಅಮರಾಪುರ, ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ತಗ್ಗಿನ ಬೂದಿಹಾಳ್, ಗೋಡೆಹಾಳ್ ಗ್ರಾಮಗಳ ಕುಡಿಯುವ ನೀರು ಪೂರೈಕೆ ಯೋಜನೆಗಾಗಿ 48.49 ಕೋಟಿ ರೂಪಾಯಿ ಮೊತ್ತದ ವಿವರವಾದ ಯೋಜನೆ (ಡಿಪಿಆರ್) ಕರ್ನಾಟಕ ನೀರಾವರಿ ನಿಗಮದಲ್ಲಿದೆ. ಆದಷ್ಟು ಶೀಘ್ರದಲ್ಲಿ ಯೋಜನೆ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಿಂಧವಾಳ ಗ್ರಾಮದ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ, ಅಸುಂಡಿ, ಲಿಂಗದೇವನಹಳ್ಳಿ ಮತ್ತು ಕಕ್ಕಬೇವಿನಹಳ್ಳಿ ಗ್ರಾಮಗಳ ಸಮೀಪ ಕಿರು ಸೇತುವೆ ನಿರ್ಮಾಣ ಕಾಮಗಾರಿಯೂ ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿದೆ ಎಂದು ವಿವರಿಸಿದರು.
ಸಂಡೂರು ತಾಲೂಕಿನ 40 ಹಳ್ಳಿಗಳ ಅಂತರ್ಜಲ ಮಟ್ಟ ಸುಧಾರಣೆಗಾಗಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಿಕ್ಕಾಗಿ ತುಂಗಭದ್ರಾ ನದಿಯಿಂದ ಕಲಘಟ್ಟ ಮತ್ತು ಸಂಡೂರು ಪಟ್ಟಣದ ಸಮೀದ 1.433 ಟಿಎಂಸಿ ನೀರನ್ನು ಸಂಗ್ರಹ ಮಾಡಿ ತಾಲೂಕಿನ 59 ಕೆರೆಗಳನ್ನು ತುಂಬಿಸುವ 1305 ಕೋಟಿ ರೂಪಾಯಿ ವೆಚ್ಚದ ಯೋಜನೆಯು ಕರ್ನಾಟಕ ನೀರಾವರಿ ನಿಗಮದಲ್ಲಿದೆ. ಮುಂದಿನ ದಿನಗಳಲ್ಲಿ ಯೋಜನೆಗೆ ಅನುಮೋದನೆ ನೀಡಲಾಗುತ್ತದೆ ಎಂದರು.
ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ನೀರನ್ನು ಪಡೆದು ಕುಡಿಯುವ ನೀರಿಗಾಗಿ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲಿಕ್ಕಾಗಿ ಕೊಟ್ಟೂರು ಕೆರೆ ಮತ್ತು ಇತರೆ 16 ಕೆರೆಗಳಿಗೆ ನೀರು ತುಂಭಿಸುವ 379 ಕೋಟಿ ರೂಪಾಯಿ ಮೊತ್ತದ ಯೋಜನೆಯ ಪ್ರಸ್ತಾವನೆಯು ನೀರಾವರಿ ನಿಗಮದಲ್ಲಿದ್ದು, ಶೀಘ್ರದಲ್ಲೇ ಅನುಮೋದನೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.