ಬಳ್ಳಾರಿ,ಆ.11 : ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಬಳ್ಳಾರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಚುರುಕುಗೊಳ್ಳಲಿದೆ.
ಜಿಲ್ಲೆಯ 1,227 ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಎಸ್ಐಆರ್ ವ್ಯಾಪ್ತಿಯಲ್ಲಿ ಬರುವ ಮತದಾರರ ಮಾಹಿತಿಯನ್ನು ಪರಿಶೀಲಿಸುವ ಕಾರ್ಯ ನಡೆಯುತ್ತಿದ್ದು, ಪರಿಷ್ಕೃತ ವೇಳಾಪಟ್ಟಿಯಂತೆ ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಕರಡು ಪಟ್ಟಿ ಪ್ರಕಟವಾದ ದಿನದಿಂದ ಸೆ.23ರವರೆಗೆ ಸಾರ್ವಜನಿಕರು ಅಹವಾಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
*ಐದು ಕ್ಷೇತ್ರಗಳಲ್ಲಿ 12.29 ಲಕ್ಷಕ್ಕೂ ಹೆಚ್ಚು ಮತದಾರರು:
ಬಳ್ಳಾರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 12,27,958 ಮತದಾರರು ಇದ್ದಾರೆ.
ಈ ಪೈಕಿ ಬಳ್ಳಾರಿ ನಗರ ಕ್ಷೇತ್ರದಲ್ಲಿ 2,79,144.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 2,51,325.
ಸಿರುಗುಪ್ಪ ಕ್ಷೇತ್ರದಲ್ಲಿ 2,28,277.
ಕಂಪ್ಲಿ ಕ್ಷೇತ್ರದಲ್ಲಿ 2,28,666 ಹಾಗೂ ಸಂಡೂರು ಕ್ಷೇತ್ರದಲ್ಲಿ 2,42,174 ಮತದಾರರಿದ್ದಾರೆ.
SIR ಪ್ರಕ್ರಿಯೆಯಲ್ಲಿ Absentee, Shifted, Dead, Duplicate ಹಾಗೂ Others ವಿಭಾಗಗಳಿಗೆ ಸೇರಿದ ಮತದಾರರ ಮಾಹಿತಿಯನ್ನು ಗುರುತಿಸಿ ಪರಿಶೀಲಿಸಲಾಗುತ್ತಿದೆ. ಈ ಪಟ್ಟಿಗೆ ಸಂಬಂಧಿಸಿದ ಮಾಹಿತಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗುವಂತೆ ಮಾಡಲಾಗಿದೆ.
*ಆ.17ರವರೆಗೆ BLOಗಳಿಗೆ ಮಾಹಿತಿ ನೀಡಲು ಅವಕಾಶ:*
SIR ಪಟ್ಟಿಯಲ್ಲಿ ಹೆಸರು ಇರುವ ಅಥವಾ ಈ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಹೊಂದಿರುವವರು ತಮ್ಮ ವ್ಯಾಪ್ತಿಯ ಮತಗಟ್ಟೆಯ BLO (ಮತಗಟ್ಟೆ ಮಟ್ಟದ ಅಧಿಕಾರಿ)ಗಳಿಗೆ ಮಾಹಿತಿ ನೀಡಬಹುದಾಗಿದೆ. ನಿಯಮಾನುಸಾರ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಮತದಾರರ ದಾಖಲೆಗಳನ್ನು ಡಿಜಿಟೈಸ್ ಮಾಡುವ ಕಾರ್ಯಕ್ಕೆ ಆ.17ರವರೆಗೆ ಕಾಲಾವಕಾಶ ನೀಡಲಾಗಿದೆ.
*ಹೊಸದಾಗಿ ಹೆಸರು ಸೇರ್ಪಡೆಗೂ ಅವಕಾಶ:*
ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಆ.24ರಿಂದ ಸೆ.23ರವರೆಗೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ. ಅರ್ಹ ಮತದಾರರು ನಮೂನೆ-6, ನಿಗದಿಪಡಿಸಿರುವ ದಾಖಲೆಗಳು ಹಾಗೂ ಘೋಷಣಾ ನಮೂನೆಯನ್ನು ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬಹುದು.
ಜಿಲ್ಲೆಯ SIR ಪಟ್ಟಿಯನ್ನು ಜಿಲ್ಲಾಡಳಿತದ ಅಧಿಕೃತ ವೆಬ್ಸೈಟ್ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕರ್ನಾಟಕದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಪಟ್ಟಿಯನ್ನು ಪರಿಶೀಲಿಸಿ ತಮ್ಮ ಹೆಸರು ಹಾಗೂ ವಿವರಗಳನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.
ಅರ್ಹ ಮತದಾರರು ಹೆಚ್ಚಿನ ಆಸಕ್ತಿ ವಹಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

