ಹಾಥರಸ್ (ಉತ್ತರ ಪ್ರದೇಶ) ಜುಲೈ 02: ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಮಂಗಳವಾರ ಧಾರ್ಮಿಕ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 107 ಮಂದಿ ಸಾವಿಗೀಡಾಗಿದ್ದಾರೆ. ಹಾಥರಸ್ ಜಿಲ್ಲೆಯ ಸಿಕಂದ್ರ ರಾವು ಪ್ರದೇಶದ ರಾತಿ ಭನ್ಪುರ್ ಗ್ರಾಮದಲ್ಲಿ ವಿಶೇಷವಾಗಿ ಹಾಕಲಾದ ಟೆಂಟ್ನಲ್ಲಿ ಧಾರ್ಮಿಕ ಬೋಧಕರೊಬ್ಬರು ತಮ್ಮ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಹೆಚ್ಚಿನ ಜನರು ‘ಸತ್ಸಂಗ’ದಲ್ಲಿ ಭಾಗವಹಿಸಿದ್ದರಿಂದ ಅಲ್ಲಿ ಉಸಿರುಗಟ್ಟಿ ಜನರಲ್ಲಿ ಅಸ್ವಸ್ಥತೆಗೆ ಕಾರಣವಾಯಿತು ಎಂದು ತೋರುತ್ತದೆ. ಆಗ ಜನರು ಹೊರಗೆ ಓಡಲು ಆರಂಭಿಸಿದ್ದರಿಂದ ಕಾಲ್ತುಳಿತ ಉಂಟಾಯಿತು. ಕಾರ್ಯಕ್ರಮದ ಸಮಯದಲ್ಲಿ ಭಾರೀ ಸೆಖೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತರು ಹೇಳಿದ್ದೇನು?
ಅದು ಧಾರ್ಮಿಕ ಬೋಧಕ ಭೋಲೆ ಬಾಬಾರ ಸತ್ಸಂಗ ಸಭೆ. ಮಂಗಳವಾರ ಮಧ್ಯಾಹ್ನ ಇಟಾಹ್ ಮತ್ತು ಹಾಥರಸ್ ಜಿಲ್ಲೆಯ ಗಡಿಯಲ್ಲಿರುವ ಸ್ಥಳದಲ್ಲಿ ಒಟ್ಟುಗೂಡಲು ತಾತ್ಕಾಲಿಕ ಅನುಮತಿಯನ್ನು ನೀಡಲಾಗಿದೆ ಎಂದು ಇನ್ಸ್ಪೆಕ್ಟರ್ ಜನರಲ್ (ಅಲಿಘರ್ ರೇಂಜ್) ಶಲಭ್ ಮಾಥುರ್ ಹೇಳಿದ್ದಾರೆ.
ಹಾಥರಸ್ನ ಗಂಗಾ ದೇವಿ (70), ಕಾಸ್ಗಂಜ್ನ ಪ್ರಿಯಾಂಕಾ (20), ಮಥುರಾದ ಜಸೋದಾ (70) ಮತ್ತು ಇಟಾಹ್ನ ಸರೋಜ್ ಲತಾ (60) ಮೃತರೆಂದು ಗುರುತಿಸಲಾಗಿದೆ. ಮೃತ ಇಬ್ಬರು ಮಕ್ಕಳನ್ನು ಕಾವ್ಯ (4) ಮತ್ತು ಆಯುಷ್ (8) ಎಂದು ಗುರುತಿಸಲಾಗಿದ್ದು ಇಬ್ಬರೂ ಶಹಜಾನ್ಪುರದವರು.
ಧಾರ್ಮಿಕ ಕಾರ್ಯಕ್ರಮ ಮುಗಿದಾಗ ಎಲ್ಲರೂ ಹೊರಗೆ ಹೋಗುವ ಅವಸರದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಸಂತ್ರಸ್ತರೊಬ್ಬರು ಹೇಳಿದ್ದಾರೆ.
ಸ್ಥಳದಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳು ಜಮಾಯಿಸಿದ್ದರು. ಯಾವುದೇ ದಾರಿಯಿಲ್ಲ, ಎಲ್ಲರೂ ಒಬ್ಬರ ಮೇಲೆ ಬಿದ್ದುಬಿಟ್ಟರು, ಆಗ ಕಾಲ್ತುಳಿತ ನಡೆಯಿತು. ನಾನು ಹೊರಗೆ ಹೋಗಲು ಪ್ರಯತ್ನಿಸಿದಾಗ, ಹೊರಗೆ ಮೋಟಾರು ಸೈಕಲ್ಗಳನ್ನು ನಿಲ್ಲಿಸಿದ್ದರಿಂದ ಅಲ್ಲಿ ದಾರಿ ಇರಲಿಲ್ಲ. ಹಲವರು ಮೂರ್ಛೆ ಹೋದರು. ಕೆಲವರು ಸತ್ತರು ”ಎಂದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾದ ಸಂತ್ರಸ್ತರು ಹೇಳಿದ್ದಾರೆ.
ಘಟನೆಗೆ ನಿಖರ ಕಾರಣ ಏನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.
ಏತನ್ಮಧ್ಯೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಹಾಥರಸ್ ಜಿಲ್ಲೆ ಮತ್ತು ಸುತ್ತಮುತ್ತಲಿನ ಅಧಿಕಾರಿಗಳಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ವೇಗಗೊಳಿಸಲು ಸೂಚಿಸಿದ್ದಾರೆ. “ಅವರು ಎಡಿಜಿ ಆಗ್ರಾ ಮತ್ತು ಕಮಿಷನರ್ ಅಲಿಘರ್ ನೇತೃತ್ವದಲ್ಲಿ ಘಟನೆಯ ಕಾರಣಗಳನ್ನು ತನಿಖೆ ಮಾಡಲು ಸೂಚನೆಗಳನ್ನು ನೀಡಿದ್ದಾರೆ” ಎಂದು ಸಿಎಂ ಕಚೇರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಮುರ್ಮು ಸಂತಾಪ
ಹಾಥರಸ್ ಕಾಲ್ತುಳಿತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, “ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಭಕ್ತರು ಸಾವಿಗೀಡಾದ ಸುದ್ದಿ ಹೃದಯ ವಿದ್ರಾವಕವಾಗಿದೆ, ಕುಟುಂಬವನ್ನು ಕಳೆದುಕೊಂಡವರಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರ ಕುಟುಂಬ ಸದಸ್ಯರು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಜುಲೈ 02: ಉತ್ತರ ಪ್ರದೇಶದ ಹಾಥರಸ್ನಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ 107 ಮಂದಿ ಸಾವಿಗೀಡಾಗಿದ್ದಾರೆ. ಈ ಘಟನೆಗೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ ಸಂತ್ರಸ್ತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ಮೋದಿ, “ನಾನು ಮಾತನಾಡುತ್ತಿದ್ದಂತೆ, ಉತ್ತರ ಪ್ರದೇಶದ ಹಾಥರಸ್ನಲ್ಲಿ ಕಾಲ್ತುಳಿತದಲ್ಲಿ ಅನೇಕ ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ಆಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಉತ್ತರ ಪ್ರದೇಶ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲಾಗುವುದು ಎಂದು ನಾನು ಈ ಸದನದ ಮೂಲಕ ಎಲ್ಲರಿಗೂ ಭರವಸೆ ನೀಡುತ್ತೇನೆ ಎಂದಿದ್ದಾರೆ.
ಲೋಕಸಭೆಯಲ್ಲಿ ಮೋದಿ ಮಾತು
ಹಾಥರಸ್ ಜಿಲ್ಲೆಯ ಸಿಕಂದರಾ ರಾವು ತಹಸಿಲ್ನ ರತಿಭಾನ್ಪುರ ಗ್ರಾಮದಲ್ಲಿ ಧಾರ್ಮಿಕ ಬೋಧಕ ಮತ್ತು ಅವರ ಪತ್ನಿ ಉದ್ದೇಶಿಸಿ ಮಾತನಾಡುತ್ತಿದ್ದ ಸತ್ಸಂಗದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದು ನೂರಕ್ಕಿಂತಲೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಮಹಿಳೆಯರು.
ಶೀಘ್ರದಲ್ಲೇ ಎಫ್ಐಆರ್ ದಾಖಲಿಸಲಾಗುವುದು ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಆದಿತ್ಯನಾಥ್ ಕೂಡ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಯೋಗಿ ಆದಿತ್ಯನಾಥ ಟ್ವೀಟ್
“ಉತ್ತರ ಪ್ರದೇಶ ಸರ್ಕಾರದ ಗೌರವಾನ್ವಿತ ಸಚಿವರಾದ ಲಕ್ಷ್ಮೀ ನಾರಾಯಣ ಚೌಧರಿ ಜಿ, ಸಂದೀಪ್ ಸಿಂಗ್ ಜಿ ಅವರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಘಟನಾ ಸ್ಥಳಕ್ಕೆ ತಲುಪಲು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ. ಎಡಿಜಿ, ಆಗ್ರಾ ಮತ್ತು ಅಲಿಘರ್ ಆಯುಕ್ತರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಅಪಘಾತದ ಕಾರಣಗಳನ್ನು ತನಿಖೆ ಮಾಡಲು ಸೂಚನೆಗಳನ್ನು ಸಹ ನೀಡಲಾಗಿದೆ. ಅಗಲಿದ ಆತ್ಮಗಳಿಗೆ ಮೋಕ್ಷ ಸಿಗಲಿ, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಭಗವಂತ ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏತನ್ಮಧ್ಯೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದುರಂತದಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವಂತೆ ಸೂಚನೆ ನೀಡಿದರು.