ಬೆಂಗಳೂರು, ಆಗಸ್ಟ್ 21: ಸಚಿವ ನಾಗೇಂದ್ರ ಅವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದ ಒಳಗೆ ಮತ್ತು ಹೊರಗೆ ಭಾರಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ವಹಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಯೋಜನೆ ಮತ್ತು ಸಾಂಖ್ಯಿಕ ಖಾತೆಯನ್ನು ನಿರ್ವಹಿಸುತ್ತಿರುವ ನಾಗೇಂದ್ರ ಅವರಿಗೆ, ಇದೀಗ ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯ’ದ ಹೊಣೆಯನ್ನೂ ನೀಡಲಾಗಿದೆ.
ಸಚಿವ ನಾಗೇಂದ್ರ ಸ್ಪಷ್ಟನೆ
ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಶಶೀಲ್ ನಮೋಶಿ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವ ನಾಗೇಂದ್ರ, ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. 2025ರಲ್ಲಿ ರಚನೆಯಾದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯಕ್ಕೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರೇ ಮುಖ್ಯಸ್ಥರಾಗಿರುತ್ತಾರೆ ಎಂದು ತಿಳಿಸಿದ್ದಾರೆ. ಈ ಸಚಿವಾಲಯದ ಅಧೀನದಲ್ಲಿಯೇ ಪ್ರಮುಖವಾದ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ (KKRDB) ಕಾರ್ಯನಿರ್ವಹಿಸಲಿದ್ದು, ಈ ಹೊಸ ಸಚಿವಾಲಯದ ಸುಗಮ ಕಾರ್ಯಾಚರಣೆಗಾಗಿ ಸರ್ಕಾರ ಒಟ್ಟು 16 ಹುದ್ದೆಗಳನ್ನು ಮೀಸಲಿಟ್ಟಿದೆ.
ಒಂದು ಕಡೆ ನಾಗೇಂದ್ರ ಅವರ ವಿರುದ್ಧ ವಿರೋಧ ಪಕ್ಷದ ನಾಯಕರು ತೀವ್ರ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರ ಅವರಿಗೆ ಈ ಮಹತ್ವದ ಖಾತೆಯನ್ನು ನೀಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.