ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣವನ್ನು ಮುಂದಿಟ್ಟುಕೊಂಡು ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪಾದಯಾತ್ರೆ ನಡೆಸಲು ಸಜ್ಜಾಗಿದ್ದ ರಾಜ್ಯ ಬಿಜೆಪಿ ಹೋರಾಟ ಬಹುತೇಕ ಕ್ಯಾನ್ಸಲ್ ಎನ್ನಲಾಗುತ್ತಿದೆ. ಪಕ್ಷದ ಆಂತರಿಕ ವಲಯದಲ್ಲಿ ಒಮ್ಮತ ಮೂಡದ ಕಾರಣ, ಉದ್ದೇಶಿತ ಪಾದಯಾತ್ರೆಯನ್ನು ಕೈಬಿಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗದಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬೃಹತ್ ರಣತಂತ್ರ ರೂಪಿಸಲಾಗಿತ್ತು. ಈ ಸಂಬಂಧ ಕಳೆದ ವಾರವಷ್ಟೇ ವಿಜಯೇಂದ್ರ ಸಾರಥ್ಯದಲ್ಲಿ ಪ್ರಮುಖ ಮುಖಂಡರ ಮೊದಲ ಹಂತದ ಪೂರ್ವಭಾವಿ ಸಭೆಯೂ ನಡೆದಿತ್ತು.
ಪಾದಯಾತ್ರೆ ಬಹುತೇಕ ಕ್ಯಾನ್ಸಲ್?
ಪಾದಯಾತ್ರೆ ಹಮ್ಮಿಕೊಳ್ಳುವ ವಿಚಾರದಲ್ಲಿ ಪಕ್ಷದ ಎಸ್‌ಟಿ ಸಮುದಾಯದ ಪ್ರಮುಖ ನಾಯಕರಲ್ಲಿ ಪೂರ್ಣ ಪ್ರಮಾಣದ ಸಹಮತ ವ್ಯಕ್ತವಾಗಿಲ್ಲ. ಸಮುದಾಯದ ಮುಖಂಡರಲ್ಲೇ ಭಿನ್ನಾಭಿಪ್ರಾಯ ಹಾಗೂ ಗೊಂದಲಗಳು ಮುಂದುವರಿದಿರುವ ಹಿನ್ನೆಲೆ ಪಾದಯಾತ್ರೆ ಇದೀಗ ಬಹುತೇಕ ಕ್ಯಾನ್ಸಲ್ ಎನ್ನಲಾಗುತ್ತಿದೆ.